Karnataka State Police

ವರದಕ್ಷಿಣೆ ಕಿರುಕುಳ

ವರದಕ್ಷಿಣೆ ಎಂದರೇನು?

`ವಧುದಕ್ಷಿಣೆ ವರದಕ್ಷಿಣೆಯ ಪರಿಭಾಷೆ: ಈ ಅಧಿನಿಯಮದಲ್ಲಿ ವರದಕ್ಷಿಣೆ - ವಧುದಕ್ಷಿಣೆ ಎಂದರೆ
ಎ) ಮದುವೆಯ ಒಂದು ಕಡೆಯವರು ಮದುವೆಯ ಇನ್ನೊಂದು ಕಡೆಯವರಿಗೆ
ಬಿ) ಮದುವೆಯ ಎರಡು ಕಡೆಯವರಲ್ಲಿ ಒಂದು ಕಡೆಯವರ ತಂದೆ ಅಥವಾ ತಾಯಿ ಅಥವಾ ಯಾರೇ ಇತರ ವ್ಯಕ್ತಿಯ ಎರಡು ಕಡೆಯವರಲ್ಲಿ ಒಂದು ಕಡೆಯವರಿಗೆ ಅಥವಾ ಇನ್ನಾರೇ ವ್ಯಕ್ತಿಗೆ
ಮದುವೆ ಕಾಲದಲ್ಲಿ ಅಥವಾ ಮದುವೆಗೆ ಮುಂಚೆ ಅಥವಾ ಮದುವೆ ಆದ ಮೇಲೆ ಯಾವಾಗಲಾದರೂ ಸದರಿ ಮದು ಮಕ್ಕಳ ಮದುವೆ ಸಂಬಂಧದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೊಟ್ಟ ಅಥವಾ ಕೊಡಲು ಒಪ್ಪಿಕೊಂಡ ಯಾವುದೇ ಸ್ವತ್ತು ಅಥವಾ ಬೆಲೆ ಬಾಳುವ ಭದ್ರತೆ, ಆದರೆ ಅದು ಮುಸ್ಲಿಮ್ ವ್ಯಕ್ತಿಗತ ಕಾನೂನು (ಷರಿಯತ್) ಅನ್ವಯಿಸುವ ವ್ಯಕ್ತಿಗಳ ಸಂದರ್ಭದಲ್ಲಿ ವಧುದಕ್ಷಿಣೆ - ವರದಕ್ಷಿಣೆ ಅಥವಾ ಮೆಹರ್ ಅನ್ನು ಒಳಗೊಳ್ಳುವುದಿಲ್ಲ.

ವರದಕ್ಷಿಣೆ ಕಿರುಕುಳ ಎಂದರೇನು? ಯಾರು ದೂರು ನೀಡಬಹುದು?

ಭಾರತದಲ್ಲಿ ವರದಕ್ಷಿಣೆ ಕಿರುಕುಳವು ಅಪರಾಧಿಕ ಕೃತ್ಯವಾಗಿದೆ. ಇದು ಗಂಡ ಮತ್ತು ಗಂಡನ ಮನೆಯವರ ಅಥವಾ ಸಂಬಂಧಿಕರ ಹಲವು ವರ್ತನೆ ಮತ್ತು ಕೃತ್ಯಗಳನ್ನು ಒಳಗೊಳ್ಳುತ್ತದೆ. ಅವುಗಳೆಂದರೆ
ವರದಕ್ಷಿಣೆ ನೀಡುವುದು ಮತ್ತು ತೆಗೆದುಕೊಳ್ಳುವುದು.
ವರದಕ್ಷಿಣೆಗೆ ಒತ್ತಾಯಿಸುವುದು.
ವರದಕ್ಷಿಣೆ ನಿಷೇದ ಕಾಯಿದೆ ಅಡಿಯಲ್ಲಿನ ಅಪರಾಧಗಳಲ್ಲದೆ ಭಾರತೀಯ ದಂಡ ಸಂಹಿತೆಯ ಕಲಂ 498 (ಎ) ನಲ್ಲಿ ವರದಕ್ಷಿಣೆಗೆ ಸಂಬಂಧಿಸಿದ ಅಪರಾಧಗಳಿವೆ. ಅವುಗಳೆಂದರೆ
ಗಂಡ ಅಥವಾ ಗಂಡನ ಸಂಬಂಧಿಗಳಿಂದ ಕ್ರೌರ್ಯ
ಈ ಪ್ರಕರಣದ ಉದ್ದೇಶಗಳಿಗಾಗೆ, ಕ್ರೌರ್ಯ ಎಂದರೆ

1. ಮಹಿಳೆಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡುವ ಅಥವಾ ಆ ಮಹಿಳೆಯ ಪ್ರಾಣಕ್ಕೆ ಧಕ್ಕೆ, ಅವಯವಕ್ಕೆ ಅಥವಾ ಆರೋಗ್ಯಕ್ಕೆ ಮಾನಸಿಕವಾಗಿಯಾಗಲಿ ಅಥವಾ ದೈಹಿಕವಾಗಿಯಾಗಲಿ ತೀವ್ರ ಕ್ಷತಿ ಅಥವಾ ಅಪಾಯ ಉಂಟುಮಾಡುವ ಸಂಭವವಿರುವಂಥ ಸ್ವರೂಪದ ಯಾವುದೇ ಉದ್ದೇಶಪೂರ್ವಕ ವರ್ತನೆ; ಅಥವಾ
2. ಅಂಥ ಪೀಡನೆಯು ಯಾವುದೇ ಸ್ವತ್ತು ಅಥವಾ ಬೆಲೆಬಾಳುವ ಭದ್ರತೆಗಾಗಿ ಯಾವುದೇ ಕಾನೂನು ವಿರುದ್ಧ ತಗಾದೆಯನ್ನು ಪೂರೈಸಲು ಮಹಿಳೆ ಅಥವಾ ಅವಳಿಗೆ ಸಂಬಂಧಪಟ್ಟ ಯಾವನೇ ವ್ಯಕ್ತಿಯನ್ನು ಒತ್ತಾಯ ಪಡಿಸುವ ದೃಷ್ಟಿಯಿಂದ ಅಥವಾ ಅಂತಹ ತಗಾದೆಯನ್ನು ಪೂರೈಸಲು ಆ ಮಹಿಳೆ ಅಥವಾ ಅವಳಿಗೆ ಸಂಬಂಧಪಟ್ಟ ಯಾವನೇ ವ್ಯಕ್ತಿಯು ವಿಫಲನಾದ ಕಾರಣದಿಂದ ಆಗಿರುವಲ್ಲಿ ಆ ಮಹಿಳೆಯ ಪೀಡನೆ.
ಮೇಲಿನ ಅಪರಾಧಗಳಡಿಯಲ್ಲಿ ವರದಕ್ಷಿಣೆಗೆ ಒಳಗಾದ ಬಲಿಪಶು ಅವರ ಪೋಷಕರು ಮತ್ತು ಸಂಬಂಧಿಕರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಬಹುದು.